ನವಣೆ
ಒಣಬೇಸಾಯದಲ್ಲಿಯ ಒಂದು ತೃಣಧಾನ್ಯ. ಸೆಟೇರಿಯ ಇಟಾಲಿಕ ಇದರ ಶಾಸ್ತ್ರೀಯ ಹೆಸರು. ಇದನ್ನು ಏಷ್ಯ, ಯೂರೋಪ್, ಚೀನ, ಆಫ್ರಿಕ ಮತ್ತು ಉತ್ತರ ಅಮೆರಿಕದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಇದರ ಸಾಗುವಳಿ ಹೆಚ್ಚು. ಇದು ಮುಖ್ಯ ಪೈರು ಅಲ್ಲದಿದ್ದರೂ, ಅನಿಯಮಿತ, ಅತಿ ಕಡಿಮೆ ಮತ್ತು ಅಲ್ಪಾವಧಿ ಮಳೆಯಾಗುವಂಥ ಪ್ರದೇಶಗಳಲ್ಲಿ ಕೂಡ ಇದನ್ನು ಬೆಳೆಯಬಹುದು. ಆದ್ದರಿಂದಲೇ ಇಂಥ ಅಲ್ಪಮಳೆಯಾಗುವ ಪ್ರದೇಶದಲ್ಲಿ ಇದರ ಪ್ರಾಮುಖ್ಯ ಹೆಚ್ಚು.

ನವಣೆಯನ್ನು ಮಧ್ಯಮ ತರಗತಿಯ ಕೆಂಪು ಎರೆಭೂಮಿಯಲ್ಲಿ ಮತ್ತು ಪೂರ್ಣ ಎರೆಭೂಮಿಯಲ್ಲಿ, ಎಂಥಹವಾ ಪರಿಸ್ಥಿತಿಯಲ್ಲಿಯೂ, ಬೆಳೆಸಬಹುದು. ಇದನ್ನು ಶುದ್ಧ ಬೆಳೆಯಾಗಿ ಇಲ್ಲವೆ ಸೇಂಗಾ, ಹತ್ತಿ, ಅವರೆ ಮುಂತಾದ ಬೆಳೆಗಳೊಂದಿಗೆ ಸಾಲು ಬೆಳೆಯಾಗಿ (ಮಿಶ್ರಬೆಳೆ) ಕೃಷಿ ಮಾಡುವುದುಂಟು. ಮುಂಗಾರಿನ ಬೆಳೆಯಾಗಿ ಜೂನ್-ಜುಲೈ ತಿಂಗಳಲ್ಲಿಯೂ ಹಿಂಗಾರಿನ ಬೆಳೆಯಾಗಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿಯೂ ನವಣೆಯನ್ನು ಬಿತ್ತುವುದಿದೆ. ನೀರಾವರಿ ಸೌಕರ್ಯಗಳಿದ್ದರೆ ಬೇಸಿಗೆಯಲ್ಲಿಯೂ (ಜನವರಿಯಿಂದ ಏಪ್ರಿಲ್‍ವರೆಗೆ) ಬಿತ್ತಬಹುದು. ಎರಡರಿಂದ ಮೂರು ಸಲ ಮರದ ರಂಟೆಯಿಂದ ಉಳುಮೆಮಾಡಿ ಅನಂತರ ಕುಂಟೆಯನ್ನು ಹೊಡೆಯಲಾಗುತ್ತದೆ. ಬಿತ್ತಲು ಎಕರೆಗೆ 4-5 ಕೆಜಿ ಬೀಜಗಳು ಬೇಕಾಗುವುವು. ಸಾಲುಬೆಳೆಯಾಗಿ ಬೆಳೆದಾಗ 1-2 ಕೆಜಿ ಬೀಜ ಸಾಕು. ನೀರಾವರಿ ಬೆಳೆಗೆ 5 ಗಾಡಿ ಕೊಟ್ಟಿಗೆಗೊಬ್ಬರವನ್ನು ಹಾಕಿ 100 ಕೆಜಿ ಅಮೋನಿಯಮ್ ಸಲ್ಫೇಟ್, 60 ಕೆಜಿ ಸೂಪರ್ ಫಾಸ್ಫೇಟ್ ಹಾಕಲಾಗುತ್ತದೆ.

ಬಿತ್ತಿದ ಮೇಲೆ ಹೆಚ್ಚಾಗಿ ಮೇಲುಗೆಲಸಗಳಿಲ್ಲ. ಒಂದೆರಡು ಸಾರಿ ಎಡೆಹೊಡೆದು ಒಮ್ಮೆ ಕಳೆ ತೆಗೆಯಲಾಗುತ್ತದೆ. ಬಿತ್ತಿದ 2.5-3 ತಿಂಗಳಲ್ಲಿ ಫಸಲು ಕೊಯ್ಲಿಗೆ ಬರುತ್ತದೆ. ಒಣಬೇಸಾಯದಿಂದ ಪ್ರತಿ ಎಕರೆಗೆ 150-175 ಕೆಜಿ ಉತ್ಪನ್ನ ಪಡೆಯಬಹುದು. ನೀರಾವರಿ ಸೌಲಭ್ಯದಿಂದ 500 ಕೆಜಿ ವರೆಗೂ ಇಳುವರಿ ದೊರೆಯುತ್ತದೆ. ನವಣೆಯಲ್ಲಿ ಅನೇಕ ತಳಿಗಳುಂಟು. ಇವುಗಳಲ್ಲಿ ಆಂಧ್ರ ಪ್ರದೇಶದ ಉ1.ಓ1  ಮತ್ತು  ಊ1  ತಮಿಳು ನಾಡಿನ  ಅಉ1,ಅಔ2  ಮತ್ತು ಅಔ3 ಹಾಗೂ ಕರ್ನಾಟಕದ ಊ1, ಊ2 ಮತ್ತು ಓ1 ಗಳು ಮುಖ್ಯವೆನಿಸಿವೆ.

ಕೀಟಗಳು ಮತ್ತು ರೋಗಗಳು: ಜೋಳ, ಸಜ್ಜೆ ಮತ್ತು ರಾಗಿ ಬೆಳೆಗಳಿಗೆ ತಗಲುವ ರೋಗಗಳು ಮತ್ತು ಕೀಟಗಳು ಈ ಬೆಳೆಗೂ ತಗಲುತ್ತವೆ. ಸಂಗ್ರಹಿಸಿದ ಕಾಳುಗಳಿಗೆ ಯಾವ ಕೀಟಗಳೂ ತಗಲುವುದಿಲ್ಲ. ಆದ್ದರಿಂದ ನವಣೆ ಬರಗಾಲಕ್ಕೆ ಆಹಾರ ಪೂರೈಸುವ ಧಾನ್ಯವೆನಿಸಿದೆ. ಇದರ ಸೊಪ್ಪು ಮೃದುವಾದ್ದೂ ಹೆಚ್ಚು ಎಲೆಗಳುಳ್ಳದ್ದೂ ಆಗಿರುವುದರಿಂದ ದನಗಳಿಗೆ ಉತ್ತಮ ಆಹಾರವಾಗಿದೆ. ಆದರೆ ಮೇವು ಹೆಚ್ಚು ಉಷ್ಣವೆನಿಸುವುದರಿಂದ ಕರಾವಿನ ದನಗಳಿಗೆ ಕೊಡಬಾರದು. ಇದು ಅಷ್ಟೊಂದು ಪ್ರಾಮುಖ್ಯ ಬೆಳೆ ಅಲ್ಲದ್ದರಿಂದ ಇದರ ಉತ್ಪನ್ನ ಹೆಚ್ಚಿಸುವ ಕಾರ್ಯದಲ್ಲಿ ಹೆಚ್ಚು ಸಂಶೋಧನೆ ಆಗಿಲ್ಲ.	
	(ಜಿ.ಎನ್.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ